Logo Trop1 (1)

ಕನ್ನಡ (TROP ICSU in Kannada)

ಪ್ರಪಂಚದಾದ್ಯಂತದ ಪಠ್ಯಕ್ರಮದಲ್ಲಿ ಹವಾಮಾನ ಬದಲಾವಣೆಯ ಕುರಿತು ಶಿಕ್ಷಣ:

  • ಹವಾಮಾನ ಬದಲಾವಣೆಯು ನಮ್ಮ ಕಾಲದ ಪ್ರಮುಖ ಸಮಸ್ಯೆಗಳಲ್ಲಿ ಒಂದು.
  • ಇದು ಎಲ್ಲಾ ದೇಶಗಳು ಮತ್ತು ಅವುಗಳ ನಾಗರಿಕರ ಸುಸ್ಥಿರ ಮತ್ತು ಸಮಾನ ಅಭಿವೃದ್ಧಿಯ ಮೇಲೆ ಪರಿಣಾಮ
    ಬೀರುತ್ತದೆ.

  • ಪರಿಹಾರಗಳು ಸಾಧ್ಯವಾಗಬೇಕಾದರೆ, ಜನರಿಗೆ ಸಮಸ್ಯೆಯ ಬಗ್ಗೆ ಅರಿವಿರಬೇಕು.

  • ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಕ್ರಮಗಳು ಸ್ಥಳೀಯ ನೆಲೆಗಟ್ಟಿನದ್ದಾದರೂ, ಜಾಗತಿಕ
    ವಿಜ್ಞಾನವನ್ನು ಆಧರಿಸಿದ ಪರಿಹಾರಗಳನ್ನು ಒಳಗೊಂಡಿರುತ್ತವೆ.
  • ಹವಾಮಾನ ಬದಲಾವಣೆ ಕುರಿತ ಶಿಕ್ಷಣವನ್ನು ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಂಯೋಜಿಸುವುದರಿಂದ, ಹವಾಮಾನ
    ಬದಲಾವಣೆಗೆ ಹೊಂದಿಕೊಳ್ಳುವುದು, ಹವಾಮಾನ ಬದಲಾವಣೆಯನ್ನು ತಗ್ಗಿಸುವುದು ಮತ್ತು ಅದರ ಕಪಿಮುಷ್ಟಿಯಿಂದ
    ಹೊರಬರಲು ಬೇಕಾದ ಸೂಕ್ತ ಪರಿಹಾರಗಳನ್ನು ಸ್ಥಳೀಯವಾಗಿ ನಿರ್ಧರಿಸಲು, ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳನ್ನು
    ಪ್ರಮುಖ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಬಹುದು.

 

ಹವಾಮಾನ ಬದಲಾವಣೆಯ ಹಿಂದಿರುವ ಕಾರಣಗಳು ಮತ್ತು ಅದರ ಪರಿಣಾಮಗಳ ಅರಿವು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುವ
ಸಲುವಾಗಿ TROP ICSU ಯೋಜನೆಯು (https://climatescienceteaching.org/; https://tropicsu.org/)
ಹವಾಮಾನ ಬದಲಾವಣೆ-ಸಂಬಂಧಿತ ವಿಷಯಗಳನ್ನು ಶಾಲೆಯಲ್ಲಿ ಮತ್ತು ಪದವಿಪೂರ್ವ ಹಂತಗಳಲ್ಲಿ ಮೂಲ
ಪಠ್ಯಕ್ರಮದೊಳಗೆ ಸಂಯೋಜಿಸುವ ಗುರಿಯನ್ನು ಹೊಂದಿದೆ; TROP ICSU ಯೋಜನೆಯು ಜ್ಞಾನದ
ಪ್ರಜಾಪ್ರಭುತ್ವೀಕರಣದ ಆಶಯ ಹೊಂದಿದ್ದು, ಇದರಿಂದಾಗಿ ಇಡೀ ಮಾನವಕುಲವು ತಮ್ಮ ಪ್ರತಿಭೆ, ಕೌಶಲ್ಯ ಮತ್ತು
ಮಹತ್ವಾಕಾಂಕ್ಷೆಯನ್ನು ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರೀಕೃತ ರೀತಿಯಲ್ಲಿ ಹೂಡಿಕೆ
ಮಾಡುತ್ತದೆ.

 

ಹವಾಮಾನ ಬದಲಾವಣೆಯ ವಿಷಯಗಳನ್ನು ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಪ್ರಮುಖ ಪಠ್ಯಕ್ರಮಕ್ಕೆ ಸಂಯೋಜಿಸಲು,
ಅಗತ್ಯವಾಗಿ ಬೇಕಾದ ಪರಿಶೀಲಿತ ಮತ್ತು ಮೌಲ್ಯೀಕರಿಸಿದ ಶೈಕ್ಷಣಿಕ ಸಂಪನ್ಮೂಲಗಳ ವಿಶ್ವಾಸಾರ್ಹ ಮೂಲವನ್ನು ಒದಗಿಸುವುದು,
ಈ ಯೋಜನೆಯ ಮುಖ್ಯ ಗುರಿಯಾಗಿದೆ. ಯಾವುದೇ ವಿಭಾಗಗಳ / ಅಧ್ಯಯನ ಕ್ಷೇತ್ರಗಳ ವಿದ್ಯಾರ್ಥಿಗಳಾಗಿದ್ದರೂ, ಅವರೆಲ್ಲರೂ
ಹವಾಮಾನ ಬದಲಾವಣೆಯ ಕಾರಣಗಳು ಮತ್ತು ಪರಿಣಾಮಗಳ ಬಗ್ಗೆ ಅರಿತು, ಈ ಜಾಗತಿಕ ಸಮಸ್ಯೆಗೆ ನವೀನ ಸ್ಥಳೀಯ
ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಕೌಶಲ್ಯಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ, ಈ ವಿಧಾನವು ಖಚಿತ ನೆರವು ನೀಡುತ್ತದೆ.
ಹೀಗಾಗಿ, TROP ICSU ಯೋಜನೆಯು, ಗುಣಮಟ್ಟದ ಶಿಕ್ಷಣ (ಗುರಿ 4) ಮತ್ತು ಹವಾಮಾನ ಕ್ರಮ (ಗುರಿ 13)ಕ್ಕಾಗಿ
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳೊಂದಿಗೆ (ಎಸ್‌ಡಿಜಿ) ನೇರವಾಗಿ ಕೈಜೋಡಿಸಿದೆ ಎನ್ನಬಹುದು.

 

ಈ ಯೋಜನೆಯ ಗುರಿಗಳನ್ನು ಸಾಧಿಸಲು, ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿರುವ
(ಐಐಎಸ್ಇಆರ್) TROP ICSU ಯೋಜನೆ ಅನುಷ್ಠಾನ ತಂಡವು ವಿಶ್ವದಾದ್ಯಂತದ ಬೋಧನಾ ಸಂಪನ್ಮೂಲಗಳ
ಭಂಡಾರವನ್ನು ಸಂಗ್ರಹಿಸಿದೆ, ಅಭಿವೃದ್ಧಿಪಡಿಸಿದೆ, ಸಂಯೋಜಿಸಿದೆ ಮತ್ತು ಮೌಲ್ಯೀಕರಿಸಿದೆ. ಹವಾಮಾನ ಬದಲಾವಣೆಗೆ
ಸಂಬಂಧಿಸಿದ ಉದಾಹರಣೆಗಳು, ಕೇಸ್ ಸ್ಟಡೀಸ್ ಮತ್ತು ಚಟುವಟಿಕೆಗಳನ್ನು ಒಳಗೊಂಡ ಈ ಅನನ್ಯ ಬೋಧನಾ
ಸಂಪನ್ಮೂಲವನ್ನು ಬಳಸಿ, ಬೋಧನ ಶಾಖೆಗೆ-ನಿರ್ದಿಷ್ಟವಾದ ವಿಷಯಗಳನ್ನು ಕಲಿಸಲು ಸಾಧ್ಯವಾಗುತ್ತದೆ. ಈ ಯೋಜನೆಯು
ಹವಾಮಾನ ಬದಲಾವಣೆಯ ಶಿಕ್ಷಣವನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಪಠ್ಯಕ್ರಮಕ್ಕೆ ಸಂಯೋಜಿಸುವ ವಿನೂತನ ಶಿಕ್ಷಣ
ವಿಧಾನವನ್ನು ಪ್ರದರ್ಶಿಸಿದೆ. ಈ ಯೋಜನೆಯ ಭಾಗವಾಗಿ, ಹವಾಮಾನ ಬದಲಾವಣೆಯ ವಿಷಯಗಳನ್ನು ಪ್ರಮುಖ ಪಠ್ಯಕ್ರಮಕ್ಕೆ
ಸಂಯೋಜಿಸುವ ಪರಿಕಲ್ಪನೆಯ ಪುರಾವೆಯಾಗಿ, ಹೆಚ್ಚಿನ ಸಂಖ್ಯೆಯ ಬೋಧನಾ ಸಂಪನ್ಮೂಲಗಳನ್ನು(ಕೆಲವು ವಿವರವಾದ, ಹಂತ-
ಹಂತದ ಪಾಠ ಯೋಜನೆಗಳೊಂದಿಗೆ) ಅಭಿವೃದ್ಧಿಪಡಿಸಿದೆ . ಪಠ್ಯಕ್ರಮದ ವಿಷಯಗಳೊಂದಿಗೆ ಹವಾಮಾನ ಬದಲಾವಣೆಯ
ವಿಷಯಗಳ ವೈಜ್ಞಾನಿಕ ಸಿಂಧುತ್ವ ಮತ್ತು ತಡೆರಹಿತ ಏಕೀಕರಣವನ್ನು ಖಚಿತಪಡಿಸಿಕೊಳ್ಳಲು, ವಿವರವಾದ ವಿಧಾನವನ್ನು

 

ಅಳವಡಿಸಲಾಗಿದೆ. ಆದ್ದರಿಂದ TROP ICSU ಶೈಕ್ಷಣಿಕ ಸಂಪನ್ಮೂಲಗಳ ಬಳಕೆಯು, ಕಲಿಕೆಯ ಗುಣಮಟ್ಟವನ್ನು ಸುಧಾರಿಸಲು
ಸಹಾಯ ಮಾಡುತ್ತದೆ ಮತ್ತು ಮೂಲ ಪಠ್ಯಕ್ರಮದಿಂದ ವಿಚಲನಗೊಳ್ಳದೇ ವಿದ್ಯಾರ್ಥಿಗಳಲ್ಲಿ ಹವಾಮಾನ ಬದಲಾವಣೆಯ
ಜಾಗೃತಿಯನ್ನು ಹೆಚ್ಚಿಸುತ್ತದೆ.

 

ಈ ಯೋಜನೆಯ ಮೊದಲ ಹಂತದಲ್ಲಿ ಭಾರತ, ಭೂತಾನ್, ದಕ್ಷಿಣ ಆಫ್ರಿಕಾ, ಉಗಾಂಡಾ, ಈಜಿಪ್ಟ್, ಫ್ರಾನ್ಸ್, ಆಸ್ಟ್ರಿಯಾ, ಯುಕೆ,
ಚೀನಾ ಮತ್ತು ಆಸ್ಟ್ರೇಲಿಯಾದ ಶಿಕ್ಷಕರಿಗೆ ಈ ತಂಡವು ಕಾರ್ಯಾಗಾರಗಳನ್ನು ನಡೆಸಿದೆ. ಈ ಕಾರ್ಯಾಗಾರಗಳಲ್ಲಿ, ಸ್ಥಳೀಯ
ಶಿಕ್ಷಣತಜ್ಞರು ಈ ಬೋಧನಾ ಸಂಪನ್ಮೂಲಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಿದರು. ಕೆಲವು ಸ್ಥಳಗಳಲ್ಲಿ,
ಹವಾಮಾನ ಬದಲಾವಣೆಯ ತಜ್ಞರು ಸಹ ಕಾರ್ಯಾಗಾರಗಳಿಗೆ ಹಾಜರಾಗಿ, ತಮ್ಮ ಪ್ರತಿಕ್ರಿಯೆಯನ್ನು ನೀಡಿದರು. ಯುಎನ್‌ಸಿಸಿ:
ಲರ್ನ್, ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ), ಮತ್ತು ವಿಶ್ವ ಹವಾಮಾನ ಸಂಶೋಧನಾ ಕಾರ್ಯಕ್ರಮ
(ಡಬ್ಲ್ಯುಸಿಆರ್‌ಪಿ)ದಂತಹ ವಿಶ್ವಸಂಸ್ಥೆಯ ಸಂಸ್ಥೆಗಳೊಂದಿಗೆ ಬಲವಾದ ಸಹಯೋಗವನ್ನು ಈ ಯೋಜನೆಯ ಮುಖಾಂತರ
ಸ್ಥಾಪಿಸಲಾಗಿದೆ ಮತ್ತು ಆ ಸಂಸ್ಥೆಗಳ ಪ್ರತಿನಿಧಿಗಳು ಈ ಪಾಠ ಯೋಜನೆಗಳು ಮತ್ತು ಬೋಧನಾ ಸಾಧನಗಳನ್ನು
ಮೌಲ್ಯೀಕರಿಸಿದ್ದಾರೆ, ಜೊತೆಗೆ, ಈ ಸಂಪೂರ್ಣ ಯೋಜನೆಗೆ ಅನುಮೋದನೆ ನೀಡಿದ್ದಾರೆ.

 

ವಿಜ್ಞಾನ ಶಿಕ್ಷಣ ಕಾರ್ಯಕ್ರಮಗಳಲ್ಲಿ ತಮ್ಮ
ಶೈಕ್ಷಣಿಕ ಪ್ರಯತ್ನಗಳನ್ನು ಪ್ರಸ್ತುತಪಡಿಸಲು ಈ ಯೋಜನಾ ತಂಡಕ್ಕೆ ಅವಕಾಶವಿದ್ದು, 2019 ಮೇ 14-15ರಂದು
ನ್ಯೂಯಾರ್ಕ್‌ನ ಯುಎನ್ ಕೇಂದ್ರ ಕಚೇರಿಯಲ್ಲಿ ನಡೆದ “4 ನೇ ಯುಎನ್ ಎಸ್‌ಟಿಐ ಫೋರಂ 2019” ರ ಸಂದರ್ಭದಲ್ಲಿ ಮತ್ತು
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ 2019 ಜುಲೈ 11 ರಂದು “ಸುಸ್ಥಿರ ಅಭಿವೃದ್ಧಿಯ ಬಗೆಗಿನ ಉನ್ನತ ಮಟ್ಟದ
ರಾಜಕೀಯ ವೇದಿಕೆ – 2019” (ಎಚ್‌ಎಲ್‌ಪಿಎಫ್) ಎಂಬ ವಿಶೇಷ ಸಂದರ್ಭದಲ್ಲಿ "ಪರಿಸರ ಮತ್ತು ಹವಾಮಾನ ಕ್ರಮದ
ಕಡೆಗೆ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಪರಿಪಾಠಗಳು ಮತ್ತು ವಿಧಾನಗಳು" ಎಂಬ ಅಧಿವೇಶನದಲ್ಲಿಈ ತಂಡವು ಪ್ರಸ್ತುತ
ಪಡಿಸಿತು. ಇದಲ್ಲದೆ, ಈ ತಂಡವು ಪೋಲೆಂಡ್‌ನ ಸಿಒಪಿ 24 ರಲ್ಲಿ ನಡೆದ ಹವಾಮಾನ ಶಿಕ್ಷಣ ಕಾರ್ಯಕ್ರಮಗಳಲ್ಲಿ ಹಾಗೂ
ಶಿಕ್ಷಕರು ಮತ್ತು ಹವಾಮಾನ ತಜ್ಞರ ಸಮಾವೇಶಗಳಲ್ಲಿ, ಕಾರ್ಯಾಗಾರಗಳಲ್ಲಿ ಭಾಗವಹಿಸಿದೆ.

TROP ICSU ಉಪಕ್ರಮವು ಬಹಳ ಸಮಯೋಚಿತವಾಗಿದ್ದು, ಪ್ರಪಂಚದಾದ್ಯಂತ, ವಿಶೇಷವಾಗಿ ಯುವಜನರಲ್ಲಿ, ಪರಿಸರ
ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಮತ್ತು ಇಟಲಿಯಂತಹ ಕೆಲವು ದೇಶಗಳು ಪ್ರತಿ ಮಗುವಿನ ಪಠ್ಯಕ್ರಮದಲ್ಲಿ ಹವಾಮಾನ
ಬದಲಾವಣೆಯನ್ನು ಬಹಿರಂಗವಾಗಿ ಸೇರಿಸಲು ಪ್ರಯತ್ನ ನಡೆಸಿರುವ ಕ್ರಮಗಳನ್ನು ಈ ಯೋಜನೆಯು ಪ್ರತಿಧ್ವನಿಸುತ್ತದೆ.
TROP ICSU ಯೋಜನೆಯ ಮೊದಲ ಹಂತವನ್ನು (2017-2019) ಅಂತರಾಷ್ಟ್ರೀಯ ವಿಜ್ಞಾನ ಮಂಡಳಿಯ (ISC) ಮೂರು
ವರ್ಷಗಳ ಅನುದಾನದಿಂದ ಬೆಂಬಲಿಸಲಾಗಿದೆ.

SUBSCRIBE

To Subscribe to our newsletter please enter